ಯಾರ್ಕಂಡ್ -
	ಚೀನದ ಸ್ವಯಮಾಡಳಿತ ಪ್ರದೇಶ ಸಿಂಕಿಯಾಂಗನ ನೈಋತ್ಯದಲ್ಲಿರುವ ಒಂದು ಪುರಾತನ ಪಟ್ಟಣ. ಸ್ವಾಚ ಎಂದು ಕರೆಯುವ ಈ ನಗರ ಯಾರ್ಕಂಡ್ ನದಿಯ ದಡದಲ್ಲಿ ತಕ್ಲಮಕಾನ್ ಮರಳು ಭೂಮಿಯ ಅಂಚಿನಲ್ಲಿದೆ. ಇದು ಕ್ಯಾಷ್‍ಗರ್ ನಗರದ ಆಗ್ನೇಯಕ್ಕೆ ಟಾರೀಮ್ ಮಹಾನದಿಯ ಜಲಾಯನ ಪ್ರದೇಶದಲ್ಲಿದೆ. ಯಾರ್ಕಂಡ್ ನದಿಯಿಂದಾಗಿ ಇಲ್ಲಿಯ ಓಯಾಸಿಸ್ ಚಿಲುಮೆಗಳು ಜಲಸಮೃದ್ಧಿ ಹೊಂದಿವೆ. ಪಾಶ್ಚಾತ್ಯರು ಈ ಪಟ್ಟಣವನ್ನು ಪಿನ್‍ಯಿನ್ ಎಂದೂ ಕರೆದಿದ್ದಾರೆ. ಪಟ್ಟಣ ಹಲವಾರು ಪ್ರತ್ಯೇಕ ಗೋಡೆಗಳುಳ್ಳ ಘಟಕಗಳಿಂದ ಕೂಡಿದೆ. ಅವುಗಳಲ್ಲಿ ಒಂದು ಘಟಕಕ್ಕೆ ಸ್ವಾಚ ಮತ್ತೊಂದು ಘಟಕಕ್ಕೆ ಯಾರ್ಕಂಡ್ ಎಂಬ ಹೆಸರುಗಳಿವೆ. ಅದರೆ ಈ ಎರಡು ಹೆಸರುಗಳೂ ಸಾಮಾನ್ಯವಾಗಿ ಇಡೀ ಪಟ್ಟಣಕ್ಕೆ ಹಾಗೂ ಅದರ ಚಿಲುಮೆಗಳಿರುವ ಭಾಗಗಳಿಗೆ ಅನ್ವಯಿಸುತ್ತದೆ. ಕೋಷಿನ್ ಜಿಲ್ಲೆಯ ಒಂದು ಆಡಳಿತ ವಿಭಾಗವಿರುವ ಈ ಪಟ್ಟಣ ಉ.ಅ. 38º 25' ಪ.ರೇ 77º 16' ನಲ್ಲಿದೆ. ಭಾರತದ ರಾಜಧಾನಿ ನವದೆಹಲಿಯ ಉತ್ತರಕ್ಕೆ 1100 ಕಿಮೀ ದೂರದಲ್ಲಿ ಈ ಪಟ್ಟಣವಿದೆ.

	ಕ್ರಿ.ಪೂ. ಎರಡನೆಯ ಶತಮಾನದ ಉತ್ತರಾರ್ಧದಲ್ಲಿ ಯಾರ್ಕಂಡ್ ಮೊತ್ತಮೊದಲಿಗೆ ಚೀನಿಯರ್ ಗಮನಕ್ಕೆ ಬಂತು. ಆಗ ಇದಕ್ಕೆ ಸ್ವಾಚ ರಾಜ್ಯವೆಂಬ ಹೆಸರಿತ್ತು. ಪಾಮೀರ್ ಪರ್ವತಗಳ ಮಾರ್ಗ ಈ ರಾಜ್ಯದ ಮೂಲಕವೇ ಹೋಗುತ್ತಿತ್ತು. ಕ್ರಿ,ಪೂ ಒಂದನೆಯ ಶತಮಾನದಲ್ಲಿ ನೆರೆಹೊರೆಯ ರಾಜ್ಯಗಳ ಘರ್ಷಣೆಗಳಿಂದಾಗಿ ಯಾರ್ಕಂಡ್ ರಾಜ್ಯ ಬಲಹೀನವಾಗಿ ಚೀನೀಯರ ವಶವಾಯಿತು. ಚೀನದ ಟಾಂಗ್ ರಾಜಸಂತತಿಯ ಕಾಲದಲ್ಲಿ (618-907) ಯಾರ್ಕಂಡ್ ಪುನಃ ಪ್ರಸಿದ್ಧಿಗೆ ಬಂದು ಇದರ ಪ್ರಭಾವದಿಂದ ಈ ನಗರದ ದಕ್ಷಿಣದ ಕಾರ್ಗಲಿಕ್ ಮತ್ತು ವಾಯವ್ಯದ ಕ್ಯಾಷ್‍ಗರ್ ಪಟ್ಟಣಗಳು ಹಿಂದೆ ಬಿದ್ದುವು. 12 ಮತ್ತು 13ನೆಯ ಶತಮಾನಗಳಲ್ಲಿ ಯಾರ್ಕಂಡ್ ಮಂಗೋಲ ಸಾಮ್ರಾಜ್ಯದ ಮುಖ್ಯ ಪಟ್ಟಣವಾಗಿದ್ದು 16ನೆಯ ಶತಮಾನದ ಪ್ರಾರಂಭದಲ್ಲಿ ಅಂತರ್ಯುದ್ಧಗಳಿಂದ ಛಿದ್ರಗೊಂಡು ಕೊನೆಗೆ ಕ್ಯಾಷ್‍ಗರದ ಖಾನರ ರಾಜ್ಯಕ್ಕೆ ಸೇರಿಹೋಯಿತು. 18ನೆಯ ಶತಮಾನದಲ್ಲಿ ಇದು ಅಂತಿಮವಾಗಿ ಚೀನಿ ನಿಯಂತ್ರಣಕ್ಕೊಳಗಾಯಿತು.

	ಯಾರ್ಕಂಡ್ ಚಿಲುಮೆಯ ಪ್ರದೇಶ ಸು. 3,210 ಚಕಿಮೀ. ಇದೆ. ಇದು ಫಲವತ್ತಾಗಿದೆ. ವಿವಿಧ ಧಾನ್ಯಗಳು ಹತ್ತಿ, ಸೆಣಬು, ಹಣ್ಣು, ಬೆಳೆಯುತ್ತಾರೆ. ಸ್ಥಳೀಯ ರೇಷ್ಮೆ ಕೈಗಾರಿಕೆಗೆ ಅನುಕೂಲವಾಗಿ ಹಿಪ್ಪುನೆರಳೆ ಗಿಡಗಳನ್ನು ಬೆಳೆಯುತ್ತಾರೆ. ಚಿಲುಮೆಗಳ ಸುತ್ತ ಒಂಟೆ, ಕುದುರೆ ಹಾಗೂ ಕುರಿ ಸಾಕಣೆ ಮುಖ್ಯ ಕಸಬು. ಪಟ್ಟಣದಲ್ಲಿ ಹತ್ತಿ, ರೇಷ್ಮೆ ಮತ್ತು ಜಮಖಾನೆ ಕಾರ್ಖಾನೆಗಳಿವೆ. ಚರ್ಮದ ವಸ್ತುಗಳ ತಯಾರಿಕೆಗೆ ಸಹ ಯಾರ್ಕಂಡ್ ಪ್ರಸಿದ್ಧ. ಚೀನೀಯರು, ವೀಗುರ್ ಹಾಗೂ ಇರಾನಿ ಜನ ಇಲ್ಲಿಯ ನಿವಾಸಿಗಳು. ಪಟ್ಟಣ ಇಸ್ಲಾಂ ಸಂಸ್ಕøತಿಯ ಕೇಂದ್ರ. ಮಾರ್ಕೊಪೋಲೊ ಈ ಪಟ್ಟಣಕ್ಕೆ ಭೇಟಿನೀಡಿದ್ದ. 
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ